ಫ್ರೆಂಚ್ ಛಂದಸ್ಸು
	ಇತರ ರೊಮ್ಯಾನ್ಸ್ ದೇಶೀಯ ಭಾಷೆಗಳಂತೆ ಫ್ರೆಂಚೂ ತನ್ನ ಛಂದಸ್ಸಿನ ಮೂಲಕ್ಕೆ ಕ್ರೈಸ್ತಮತದ ಲ್ಯಾಟಿನ್ ಸಂಕೀರ್ತನೆಗಳಿಗೇ ಹೋಗುತ್ತದೆ. ಆದರೂ ಲ್ಯಾಟಿನ್ ವೃತ್ತಗಳಿಗೂ ಫ್ರೆಂಚಿನವಕ್ಕೂ ಇರುವ ಸಮಾನ ಲಕ್ಷಣ ಬಹಳ ಕಡಿಮೆ. ಲ್ಯಾಟಿನ್ ಶಾಸ್ತ್ರೀಯ ಛಂದಸ್ಸಿಗೆ ಆಧಾರ ತತ್ತ್ವವಾಗಿರುವುದು ಉಚ್ಚಾರಣೆಯ ಕಾಲ ಅಥವಾ ಮಾತ್ರೆ; ಹ್ರಸ್ವ ಮತ್ತು ದೀರ್ಘ ಸ್ವರಗಳು ಒಂದಾದ ಮೇಲೊಂದು ಕ್ರಮವಾಗಿ ಬರುವಿಕೆಯ ಮೇಲೆ ಪ್ರಾಧಾನ್ಯವಿತ್ತೇ ಹೊರತು ಉಚ್ಚಾರಣೆಯ ಒತ್ತಿನ ಮೇಲಲ್ಲ. ಐದನೆಯ ಶತಮಾನದ ಅನಂತರ ಒತ್ತಿಗೆ ಅಥವಾ ಭಾರಕ್ಕೆ ಹೆಚ್ಚು ಪ್ರಾಮುಖ್ಯ ಬಂತು. ಮಾತ್ರೆಯನ್ನು ಅದು ಅತಿಕ್ರಮಿಸಿತು. 
ಪದ್ಯಪಂಕ್ತಿಯಲ್ಲಿರಬೇಕಾದ ಉಚ್ಚಾರಾಂಶಗಳು ನಿಷ್ಕರ್ಷಿತವಾದವು; ಪ್ರಾಸ ಹೊಸದಾಗಿ ಬಂದು ಸೇರಿಕೊಂಡಿತು. ಗೊತ್ತಾದ ಸಂಖ್ಯೆಯ ಉಚ್ಚಾರಾಂಶಗಳು ಮತ್ತು ಪ್ರಾಸ-ಈ ಎರಡೂ ಲ್ಯಾಟಿನ್ನಿನಿಂದ ಪ್ರಾಚೀನ ಫ್ರೆಂಚ್ ಪದ್ಯ ಕಾವ್ಯಕ್ಕೆ ಇಳಿದು ಬಂದುವು.

	ಆಧುನಿಕ ಫ್ರೆಂಚ್ ಪದ್ಯಗಳಲ್ಲಿ ಲಯವನ್ನು ನಿರ್ಮಿಸಿಕೊಡುವ ಘಟಕಾಂಶಗಳು ಇವು: ಒತ್ತುಕೂಡಿದ ಮತ್ತು ಒತ್ತಿಲ್ಲದ ಉಚ್ಚಾರಾಂಶಗಳ ವರಸೆ; ಪಂಕ್ತಿಗಳು ಇಷ್ಟೇ ಇರಬೇಕೆಂಬ ನಿರ್ಧಾರ, ಪ್ರಾಸದ ಮೂಲಕ ಆ ಪಂಕ್ತಿಗಳಿಗೆ ಕೊಂಡಿಕೂಡಿಕೆ. ಆದರೆ, ಜರ್ಮನ್ ಅಥವಾ ಇಂಗ್ಲಿಷ್ ಪದ್ಯಗಳಲ್ಲಿ ಭಾರಕ್ಕೆ ಇರುವ ಮಹತ್ತ್ವ ಫ್ರೆಂಚ್ ಪದ್ಯದಲ್ಲಿ ಇಲ್ಲ. ಪದದಲ್ಲಿ ಯಾವ ನಾದಪೂರ್ಣ ಉಚ್ಚಾರಾಂಶ ಕಡೆಯದೊ ಅದೇ ಒತ್ತುಳ್ಳ ಉಚ್ಚಾರಾಂಶ; ಒಂದು ಪದ್ಯ ಪಂಕ್ತಿಗೆ ಎರಡೂ, ಮೂರೂ, ನಾಲ್ಕೂ ಒತ್ತಿನ ಉಚ್ಚಾರಾಂಶ ಇರುತ್ತವೆ. ಅವಕ್ಕೆ ಹೆಚ್ಚು ಕಡಿಮೆ ಸಮಾನಾಂತರದ ಜಾಗ ಸಿಗುತ್ತದೆ. ರಾಸೀನನ ಫೇದ್ರ ಎಂಬ ಗಂಭೀರನಾಟಕದ ಈ ಸಾಲಿನಲ್ಲಿ ನಾಲ್ಕು ಭಾರಗಳಿವೆ:

	ಕ ಸೇ ವಾಯಿನ್ ಆರ್ನಮಾಂತ್, ಕ ಸೇ ವ್ಹಲೇ ಮ ಪೇಸಾನ್!

	ಲ್ಯಾಟಿನ್ ಪದ್ಯಕ್ಕೆ ಅತ್ಯಗತ್ಯವಾಗಿದ್ದ ಯತಿಗೆ ಪ್ರಾರಂಭಕಾಲದ ಫ್ರೆಂಚ್ ಪದ್ಯದಲ್ಲೂ ಅದೇ ಗೌರವದ ಪಾತ್ರವಿತ್ತು. ಉದಾಹರಣೆಗಾಗಿ, ರೋಲ್ಯಾನ್ನನ ಕಾವ್ಯದಲ್ಲಿ ಪ್ರತಿ ಪಂಕ್ತಿಗೂ ನಾಲ್ಕು ಮತ್ತು ಆರು ಉಚ್ಚಾರಾಂಶಗಳ ಎರಡು ಭಾಗ. ಯತಿಯ ಬಳಕೆಯಲ್ಲಿ ಭಾರಿ ವೈವಿಧ್ಯವಿದೆ; ಒಟ್ಟಿನಲ್ಲಿ ಸಣ್ಣಪುಟ್ಟ ಸಾಲುಗಳು ವಿನಾ ಮಿಕ್ಕೆಲ್ಲ ಸಾಲುಗಳಿಗೂ ಯತಿಯಿದ್ದರೆ ಪದ್ಯರೂಪ.

	ಪ್ರಾಸವೆಂಬುದು ಆದಿಯಲ್ಲಿ ಕೇವಲ ಸ್ವರಗಳ ನಾದಸಾಮ್ಯವಾಗಿದ್ದು, ಹನ್ನೆರಡನೆಯ ಶತಮಾನದಲ್ಲಿ ವೃದ್ಧಿಗೊಂಡು ಪೂರ್ಣ ಪ್ರಾಸ ಅಥವಾ ಅಂತ್ಯಪ್ರಾಸವೆಂದು ಹೇಳಿಸಿಕೊಳ್ಳುವ ಸಂಗತಿಯಾಯಿತು. ಎಂದರೆ, ಎರಡು ಅಥವಾ ಮೂರು ಪಂಕ್ತಿಗಳ ಕೊನೆಯ ಒತ್ತುಳ್ಳ ಉಚ್ಚಾರಾಂಶಗಳಿಗೆ ಸಂಪೂರ್ಣ ನಾದಸಾಮ್ಯತೆ ಇರತಕ್ಕದು. ಭಾರದ ಉಚ್ಚಾರಾಂಶವನ್ನು ಹಿಂಬಾಲಿಸಿ ಭಾರವಿಲ್ಲದ್ದು ಬಂದರೆ ಅದು ಹೆಣ್ಣುಪ್ರಾಸ. ಹೆಣ್ಣುಪ್ರಾಸದಲ್ಲಿ ಕಡೆಯ ವ್ಯಂಜನ ಒಂದೇ ಆಗಿರಬೇಕು. ಈ ನಿದರ್ಶನದಲ್ಲಿ.

	ವೂ ಲ ಸವೇ, ವೂ ಕ ಜದೋರ,

	ಆಮೂ, ರೇಙಸೊ,

	ಕಿ ವೂ ಲವೇ ಕ್ಯಾಮ್ ಲರೋರ

	ಅ ಲ್ಹೊರೀಙಸೊ

	ಅದೋರ ಆರೋರ ಹೆಣ್ಣುಪ್ರಾಸ, ರೇಙಸೊ ಹೋರಿಙಸೊ ಗಂಡು ಪ್ರಾಸ. ಪ್ರಾಸಗಳು ಜೊತೆ ಜೊತೆಯಾಗಿ ಬರಬಹುದು, ಅಥವಾ ಒಂದು ಸಾಲನ್ನು ಬಿಟ್ಟು ಮುಂದಿನ ಸಾಲಿನಲ್ಲಿ ಬರಬಹುದು. ಫ್ರೆಂಚ್ ಗಂಭೀರನಾಟಕದಲ್ಲಿ ಎರಡು ಪುರುಷ ಪ್ರಾಸವಾದ ಮೇಲೆ ಎರಡು ಸ್ತ್ರೀಪ್ರಾಸ ಬಂದು ಸೇರುವುದೇ ನಿಷ್ಠೆಯ ಪ್ರಾಸಪದ್ಧತಿ.

	ಉಚ್ಚಾರಾಂಶಗಳ ಸಂಖ್ಯೆ ನಿಯತವಾಗಿರುವುದರಿಂದ ಪಂಕ್ತಿಯಲ್ಲಿರುವ ಉಚ್ಚಾರಾಂಶಗಳ ಪರಿಮಿತಿಯೇ ಫ್ರೆಂಚ್ ಪದ್ಯಜಾತಿಗಳನ್ನು ವಿಭಜಿಸುವ ಸೂತ್ರ. ಸಮವೃತ್ತಗಳೇ ಅಧಿಕ; ಹನ್ನೆರಡು ಎಂಟು ಉಚ್ಚಾರಾಂಶಗಳ ಪಂಕ್ತಿಗಳೆ ಬಹುವಾಗಿ ಬಳಕೆಯಲ್ಲಿವೆ.

	ಮಧ್ಯಯುಗದ ಅಲೆಕ್ಸಾಂಡರನ ಅದ್ಭುತ ಕಥೆ ಪ್ರಥಮವಾಗಿ ಉಪಯೋಗಿಸಿದ ಪದ್ಯಪಂಕ್ತಿಗೆ ಅಲೆಕ್ಸಾಂಡ್ರಿನ್ ಎಂಬ ನಾಮಾಂಕಿತ ಅಂಟಿಕೊಂಡಿತು. 16ನೆಯ ಶತಮಾನದಲ್ಲಿ ಅದು ಜನಪ್ರಿಯವಾಗಿ. 17ನೆಯದರಲ್ಲಿ ಗಂಭೀರ ನಾಟಕದ ಛಂದೋ ಮಾಧ್ಯಮವಾಗಿ ಅಂಗೀಕೃತವಾಯಿತು. ಅದಕ್ಕೆ ಒಟ್ಟು ಹನ್ನೆರಡು ಉಚ್ಚಾರಾಂಶ; ಅವು ಯತಿಯ ಒತ್ತಾಸೆಯಿಂದ ಆರು ಆರಾಗಿ ಎರಡು ಭಾಗವಾಗಬಹುದು, ಅಥವಾ ನಾಲ್ಕು ನಾಲ್ಕಾಗಿ ಮೂರು ಭಾಗವಾಗಬಹುದು.

	ಲೇ ಕರ್ನೆಲ್ ಎ ಸೋ; ನಾಮ್ ಲ ಮಾಂದ್ ಎ ಸೋ; ಊವ್ರಾಜ ಇದರ ಕ್ರಮ 6+6; ಆದರೆ

	ತೂಜೂರ್ ಏಮೆ ತುಜೂರ್ ಪ್ಲೊರೆ ತೂಜೂರ್ ಸೂಫ್ರೀ ಇದರ ಕ್ರಮ 4+4+4

	ಯತಿ ಅಸಮವಾಗಿಯೂ ಬರಬಹುದು: ರಾಸೀನನ ಈ ಪಂಕ್ತಿಯನ್ನು ನೋಡಿ:

	ಉಯಿ ಸೇ ಆಗಮೆಮ್ನಾ: ಸೇ; ತೋ ರುಅ ಕಿ ತ ಪ್ಪೆಲ್ (1+5+6)

	ಇದರಿಂದ ಬರಿ ಲಯದ ಮೂಲಕವೇ ರೂಪವೈವಿಧ್ಯಕ್ಕೆ ಅವಕಾಶ ದೊರಕಿತು. ಆಮೇಲೆ ಬಂದ ರೊಮ್ಯಾಂಟಿಕ್ ಕವಿಗಳಿಗೆ, ಅದರಲ್ಲೂ ವಿಕ್ಟರ್ ಹ್ಯೂಗೊವಿಗೆ, ಅಲೆಂಕ್ಸಾಡ್ರಿನ್ನನ್ನು ಭಾಗಬಿಡಿಸಿ ಕೀಲು ಕಳಚುವುದೇ ಒಂದು ಸಂತಸದ ಉದ್ಯೋಗವಾಯಿತು. ಆ ಪಂಕ್ತಿಯ ವಾಗಾಡಂಬರದ ಧೋರಣೆಯನ್ನು ಕುಗ್ಗಿಸುವ ಉದ್ದೇಶ ಅವನದ್ದು. ಇಂಗ್ಲಿಷಿನ ಪ್ರಾಸರಹಿತ ದಶ ಉಚ್ಚಾರಾಂಶದ ಪಂಕ್ತಿಯೊಡನೆಯೂ 18ನೆಯ ಶತಮಾನದ ದ್ವಿಪದಿಗೂ ಹೆಚ್ಚುಕಡಿಮೆ ಸದೃಶವಾಯಿತು ಈ ಅಲೆಕ್ಸಾಂಡ್ರಿನ್.

	ದಶಾಂಶಗಳ ಪಂಕ್ತಿ ಮಧ್ಯಯುಗದ ಭವ್ಯಕಾವ್ಯದ ಮಾಧ್ಯಮವಾಗಿತ್ತು. 4+6 ಅಥವಾ 6+4 ಅದರ ಆಂತರಿಕ ಲಯವಾಗಿತ್ತು. ಹೊಸಹುಟ್ಟಿನ ಸಮಯದಲ್ಲೂ ಅದಕ್ಕೆ ವಿಶೇಷ ಪ್ರಸಾದವಿತ್ತು; ತರುವಾಯ ಅದರ ಸ್ಥಳವನ್ನು ಅಲೆಕ್ಸಾಂಡ್ರಿನ್ ತೆಗೆದುಕೊಂಡಿತು. ಆದರೆ ರೊಮ್ಯಾಂಟಕ್ ಕವಿಗಳು ಅದಕ್ಕೆ ಪುನಃ ಚೇತನ ಕೊಟ್ಟರು.

	ಎಂಟಂಶಗಳ ಪಂಕ್ತಿಗೂ ಇತರ ಕಿರುಪಂಕ್ತಿಗಳಿಗೂ ಸಾಮಾನ್ಯವಾಗಿ ಯತಿ ಇರುವುದಿಲ್ಲ.

	ಐದು ಹನ್ನೊಂದು ಅಥವಾ ಹದಿಮೂರು, ಇಂಥ ವಿಷಮ ಸಂಖ್ಯೆಯ ಉಚ್ಚಾರಾಂಶಗಳಿಂದ ಆದ ಸಾಲು ಅಷ್ಟೇನೂ ಖಚಿತವಲ್ಲದ ಅಸ್ಥಿರ ಲಯಕ್ಕೆ ಆಸ್ಪದವೀಯುವುದರಿಂದ ಸೂಕ್ಷ್ಮವೂ ನಾಜೂಕು ಆದ ಪರಿಣಾಮವನ್ನು ಉಂಟುಮಾಡಬಲ್ಲವು. ಅವನ್ನು ಸಂಕೇತ ಪ್ರಯೋಗದ ಕವಿಗಳೂ ಸ್ಥೂಲ ಚಿತ್ರಣದ ಕವಿಗಳೂ ಉಪಯೋಗಿಸಿಕೊಂಡಿದ್ದಾರೆ.

	ಭಾವಗೀತೆ ಶೋಕಗೀತೆಗಳಲ್ಲಿ ಸಮಪಾದದ ಅಥವಾ ವಿಷಮಪಾದದ ವೃತ್ತಗಳು ಅನೇಕ ಬಗೆಯವಾಗಿವೆ; ಲಾವಣಿಪದ್ಯ, ನಾಲ್ಕು ಚರಣ, ಷಟ್ಕ. ಇತ್ಯಾದಿ. ಹದಿನಾಲ್ಕು ಪಂಕ್ತಿಯ ಸಾನೆಟ್ ಇಂಗ್ಲೆಂಡಿನಲ್ಲಿ ಹೇಗೂ ಹಾಗೆ, ಇಟಲಿಯಿಂದ ಎರವಾಗಿ ಬಂತು. ಆದರೆ ಮೊದಲನೆಯ ಎಂಟು ಪಂಕ್ತಿಗಳಲ್ಲಿ ಮಾತ್ರ ಅದಕ್ಕೆ ಇಟಲಿಯ ಮಾದರಿ: ಎ ಬಿ ಬಿ ಎ ಎಂಬ ಪ್ರಾಸಕ್ರಮದ ಎರಡು ನಾಲ್ಪದಿಗಳು. ಮುಂದಣ ಆರು ಸಾಲುಗಳು ಮೂರು ಮೂರರ ಎರಡು ತ್ರಿಪದಿಗಳಾಗಿ ಡಿ ಡಿ ಸಿ ಮತ್ತು ಇ ಸಿ ಇ ಕ್ರಮದ ಪ್ರಾಸದಿಂದ ಕೂಡಿವೆ.

	ಹತ್ತೊಂಬತ್ತನೆಯ ಶತಮಾನದ ಕಡೆಯ ಭಾಗದಲ್ಲೂ ಇಪ್ಪತ್ತನೆಯ ಶತಮಾನದಲ್ಲೂ ಕವಿಗಳಿಗೆ ಹಿಂದಣ ಪದ್ಯವಲಯ ಪ್ರಕಾರಗಳು ತುಂಬ ಕಟ್ಟುನಿಟ್ಟಾಗಿ ಕಂಡುಬಂದುವು. ತಕ್ಷಣ ಉದ್ಬವಿಸುವ ಸಂವೇದನಗಳ ಸತ್ಯ ನಿರೂಪಣೆಗೆ ಅವರಿಗೆ ಬಾಗುವ ಬಳುಕುವ ಹೊಸದೊಂದು ಪದ್ಯಧಾಟಿ ಬೇಕಾಯಿತು. ಹುಡುಕಿ ಹುಡುಕಿ ಅವರು ಅನಿಯತ ಛಂದಸ್ಸು ಎಂಬ ನವೀನ ಮಾರ್ಗವನ್ನು ಕಂಡು ಹಿಡಿದರು. ಸಂಕೇತ ಪದ್ಧತಿಯ ಅಲೆಕ್ಸಾಂಡ್ರಿನಿಗೆ ಹದಿಮೂರು ಹದಿನಾಲ್ಕು ಹದಿನೈದು ಉಚ್ಚಾರಾಂಶ ಇರಬಹುದು. ಪರಂಪರೆಯ ಅಲೆಕ್ಸಾಂಡ್ರಿನ್ನುಗಳ ನಡುವೆ ಅದು ಪ್ರವೇಶಿಸುತ್ತದೆ. ಹೀಗಾಗಿ ಪದ್ಯಕ್ಕೆ ಸೂಕ್ಷ್ಮ ಚಿತ್ತ ವೃತ್ತಿಗಳನ್ನೂ ಭಾವಗಳನ್ನೂ ಪ್ರತಿಪಾದಿಸಲು ಅರ್ಹವಾದ ಅನಿಯತ ಲಯ ಪ್ರವಾಹ ಲಭಿಸಿದೆ. ಇಂಥ ಅಸಮ ಪದ್ಯ ಸಾಲುಗಳಲ್ಲಿ ಸ್ವರಸಮಾನತೆ ಮತ್ತು ವಡಿಗಳು ಅನೇಕ ಸಾರಿ ಲಯವನ್ನು ಎತ್ತಿಹಿಡಿಯುತ್ತವೆ.

	ಕಾವ್ಯದ ನಾದ ಮುಖದ ಕಡೆಗೆ ಗಮನವನ್ನು ಆಸಕ್ತಿಯಿಂದ ತಿರುಗಿಸುವುದೇನೂ ಹೊಸದಲ್ಲ. ಆದರೆ, ನವ್ಯಕಾವ್ಯ ಪದಗಳ ಅರ್ಥವನ್ನು ನಿರ್ಲಕ್ಷ್ಯಗೈದು ಕೇವಲ ಶಬ್ದಸೂಚನೆಗಳನ್ನು ಉದ್ದೇಶಪಟ್ಟು ಅರಸುತ್ತದೆ; ಆದ್ದರಿಂದ ಅದು ಅಸ್ಪಷ್ಟತೆಯ ದೋಷಾರೋಪಕ್ಕೆ ಗುರಿಯಾಗಿದೆ. ಅದರ ನಾನಾ ಪರೀಕ್ಷ್ಯಾ ಪ್ರಯೋಗಗಳಿಗೋಸ್ಕರ_ಅವೆಲ್ಲ ಸಂಪ್ರದಾಯಕ್ಕೆ ಹೊರಚ್ಚಾದವು_ಕಾವ್ಯ ರೂಪದ ವಿದ್ಯಾರ್ಥಿ ಅದನ್ನು ಪಠನಕ್ಕೆ ತೆಗೆದುಕೊಳ್ಳಬೇಕು.									(ಎಸ್.ವಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ